ಷಿಕಾಗೊ
	ಅಮೆರಿಕ ಸಂಯುಕ್ತ ಸಂಸ್ಥಾನದ ಇಲಿನಾಯ್ಸ್ ರಾಜ್ಯದ ಪ್ರಮುಖ ನಗರ. ಮಿಶಿಗನ್ ಸರೋವರದ ದಕ್ಷಿಣದಂಚಿನಲ್ಲಿದೆ. ಕೇಂದ್ರನಗರ ವಿಸ್ತೀರ್ಣ 501 ಚ.ಕಿಮೀ. ಜನಸಂಖ್ಯೆ 2783726. ಮಹಾನಗರದ ವಿಸ್ತೀರ್ಣ 13118 ಚ.ಕಿಮೀ. ಇದರ ಜನಸಂಖ್ಯೆ 7410858. ಇದು ಪ್ರಪಂಚದ ಅತ್ಯಂತ ದೊಡ್ಡ ರೈಲ್ವೆ ಕೇಂದ್ರ. ಸು. 40 ರೈಲು ಮಾರ್ಗಗಳು ಇಲ್ಲಿ ಕೂಡುತ್ತವೆ. ಇವುಗಳ ಒಟ್ಟು ಉದ್ದ ಇದೇ ದೇಶದ ರೈಲ್ವೆಯ ಅರ್ಧದಷ್ಟು. ಇದು ಪ್ರಪಂಚದ ಅತಿ ದೊಡ್ಡ ಜಾನುವಾರು ಮಾರುಕಟ್ಟೆ ಮತ್ತು ಮಾಂಸ ಪ್ಯಾಕಿಂಗ್ ಕೇಂದ್ರ. ದೇಶದ ಒಟ್ಟು ಮಾಂಸ ಉತ್ಪನ್ನದ ಕಾಲುಭಾಗ ಇಲ್ಲಿಯದು. ಪ್ರಪಂಚದ ಪ್ರಮುಖ ಧಾನ್ಯ ಮಾರುಕಟ್ಟೆಗಳಲ್ಲಿ ಇದೂ ಒಂದು. ಅಮೆರಿಕ ಸಂಯುಕ್ತ ಸಂಸ್ಥಾನದ ಉಕ್ಕು ಉತ್ಪಾದನ ಪ್ರದೇಶಗಳಲ್ಲಿ ಇದರ ಸ್ಥಾನ ಹಿರಿದು. ಜನಸಂಖ್ಯೆ ದೃಷ್ಟಿಯಿಂದ ಇದು ದೇಶದ ಮೂರನೆಯ ದೊಡ್ಡ ನಗರ. ಇಲ್ಲಿ ವಿವಿಧ ಜನಾಂಗಗಳವರು ವಾಸಿಸುತ್ತಾರೆ. ಇದು ಉತ್ತರ ಅಮೆರಿಕದ ಒಂದು ದೊಡ್ಡ ಬಂದರು - ಕಬ್ಬಿಣ ಮತ್ತು ಉಕ್ಕು ಮೊದಲ್ಗೊಂಡು ಹಲವು ಸರಕುಗಳನ್ನು ಇದು ನಿರ್ಯಾತಮಾಡುತ್ತದೆ. ಚರ್ಮ, ದಿಮ್ಮಿ, ರೈಲುಗಾಡಿ ಇವೆಲ್ಲದರ ಉದ್ಯಮ ಹಾಗೂ ವ್ಯವಹಾರಗಳ ಕೇಂದ್ರ. ಆಹಾರ, ಬಟ್ಟೆ, ಪಿಯಾನೋ, ಗೃಹೋಪಕರಣ-ಇವುಗಳ ವಿತರಣೆಯ ಕೇಂದ್ರವಿದು.

ಇಲ್ಲಿಯ ಸರಸಾರಿ ಉಷ್ಣಾಂಶ 25.70ಫ್ಯಾ. ಬೇಸಗೆಯಲ್ಲಿ 73.90ಫ್ಯಾ ಇರುತ್ತದೆ. ವಾರ್ಷಿಕ ಸರಾಸರಿ ಮಳೆ 80ಸೆಂಮೀ. ಚಳಿಗಾಲದ ಹಿಮ ವೃಷ್ಟಿ ಸಾಧಾರಣ. ಇದು ಸರೋವರದ ಅಂಚಿನಲ್ಲಿರುವುದರಿಂದ ದೈನಂದಿನ ಉಷ್ಣಾಂಶ ಅಂತರ ಅಧಿಕವಾಗಿರುವುದಿಲ್ಲ. ಇಲ್ಲಿಯದು ಹಿತಕರವಾದ ವಾಯುಗುಣ.

ಶಿಕಾಗೊ ಕೈಗಾರಿಕಾ ಪ್ರದೇಶ ಅಮೆರಿಕದ ಆರ್ಥಿಕ ಮುನ್ನಡೆಯ ಪ್ರತೀಕವಾಗಿದೆ. ಇದರ ಸನ್ನಿವೇಶ ಮೈಲ್ಮೈ ಲಕ್ಷಣ, ನೀರಿನ ಸೌಲಭ್ಯ ಸಮೀಪದಲ್ಲೆ ಇರುವ ಕಲ್ಲಿದ್ದಿಲಿನ ಮತ್ತು ಕಬ್ಬಿಣದ ಅದುರಿನ ಗಣಿಗಳು, ಸರೋವರಗಳು ಮತ್ತು ಮಿಸಿಸಿಪಿ ಜಲಮಾರ್ಗಗಳು. ಇಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹಾಗೂ ಅಭಿವೃದ್ಧಿಗೆ ಕಾರಣವಾಗಿದೆ. ಇಲ್ಲಿನ ಕಾರ್ಮಿಕರಲ್ಲಿ ಸೇ. 48ರಷ್ಟು ಜನ ಕೈಗಾರಿಕೆಗಳಲ್ಲಿ ಕೆಲಸಗಾರರು. ಸೇ.25ರಷ್ಟು ಜನ ವ್ಯಾಪಾರದಲ್ಲಿ ನಿರತರಾಗಿದ್ದಾರೆ. ಸೇ.12ರಷ್ಟು ಮಂದಿ ಸೇವಾ ವಲಯದಲ್ಲಿ ಸೇ.9ರಷ್ಟು ಮಂದಿ ಸಂಪರ್ಕ ಹಾಗೂ ಸಾರ್ವಜನಿಕ ಸೇವೆಗಳಲ್ಲಿ ನಿರತರಾಗಿದ್ದಾರೆ.

ಶಿಕಾಗೊ ನಗರ ಸಾವಿರಾರು ಬಹುಅಂತಸ್ತುಗಳ ಭವ್ಯ ಕಟ್ಟಡಗಳನ್ನು ಹೊಂದಿದೆ. ಹಿಂದೆ ಮರ ಮುಟ್ಟುಗಳಿಂದ ನಿರ್ಮಿಸಿದ ಕಟ್ಟಡಗಳು 1871ರಲ್ಲಿ ಸಂಭವಿಸಿದ ಮಹಾ ಅಗ್ನಿ ದುರಂತದಲ್ಲಿ ನಾಶವಾದ ಮೇಲೆ ಸಿಮೆಂಟ್ ಮತ್ತು ಕಬ್ಬಿಣದಿಂದ ಕೂಡಿದ ಭವ್ಯವಾದ ಕಾಂಕ್ರೀಟ ಕಟ್ಟಡಗಳ ನಿರ್ಮಾಣ ಪ್ರಾರಂಭವಾಯಿತು. ಉತ್ತರ ತೀರದ ಅಂಚಿನಲ್ಲಿ ಭವ್ಯವಾದ ಗಗನಚುಂಬಿ ಕಟ್ಟಡಗಳಿವೆ. ಇವುಗಳಲ್ಲಿ ಕಚೇರಿಗಳಿಗೆ ಹಾಗೂ ಮಾರಾಟಮಳಿಗೆಗಳಿಗೆ ಸ್ಥಳಾವಕಾಶ ಮಾಡಿಕೊಡಲಾಗಿದೆ.

ಶಿಕಾಗೊದಲ್ಲಿ ಅತಿದೊಡ್ಡ ಪ್ರಾಣಿಸಂಗ್ರಹಾಲಯವಿದೆ. ಇದಕ್ಕೆ ಶಿಕಾಗೊ ಜೂವಾಲಾಜಿಕಲ್ ಪಾರ್ಕ್ ಅಥವಾ ಬ್ರೂಕ್‍ಫೀಲ್ಡ್‍ಜೂ ಎಂದು ಹೆಸರು. ಪ್ರಪಂಚದ ವಿವಿಧ ಭಾಗಗಳಲ್ಲಿ ವಿವಿಧಪರಿಸರದಲ್ಲಿ ವಾಸಿಸುವ ಎಲ್ಲ ಬಗೆಯ ಪ್ರಾಣಿಗಳನ್ನು ಇಲ್ಲಿ ನೋಡಬಹುದು. ಇದೊಂದು ಪ್ರಮುಖ ಪ್ರಾಣಿಶಾಸ್ತ್ರದ ಅಧ್ಯಯನ ಕೇಂದ್ರ. ಇಲ್ಲಿನ ಮತ್ಸ್ಯಾಗಾರ ಬಹು ದೊಡ್ಡದು. ಪ್ರಪಂಚದ ಎಲ್ಲ ಕಡೆದೊರೆಯುವ ಮೀನುಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಬೃಹತ್ ಗಾತ್ರದ ತಿಮಿಂಗಿಲಗಳೂ ಇವೆ. ಇಲ್ಲಿ ನಡೆಯುವ ಡಾಲ್ಫಿನ್ ಪ್ರದರ್ಶನ ಪ್ರಪಂಚ ವಿಖ್ಯಾತಿಗೊಳಿಸಿದೆ. ಇಲ್ಲಿ ಅನೇಕ ವಿಸ್ತಾರವಾದ ಸುಂದರ ಉದ್ಯಾನವನಗಳನ್ನು ನಿರ್ಮಿಸಲಾಗಿದೆ.

ಶಿಕಾಗೊ ಅಮೆರಿಕದ ಪ್ರಮುಖ ವಿದ್ಯಾಕೇಂದ್ರಗಳಲ್ಲೊಂದು. ಇಲ್ಲಿನ ನೂರಾರು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಸಾವಿರಾರು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಉನ್ನತ ವ್ಯಾಸಂಗ ಕ್ಷೇತ್ರದಲ್ಲಿ ಶಿಕಾಗೊ ಪ್ರಮುಖವಾದುದು. ಶಿಕಾಗೊ ವಿಶ್ವವಿದ್ಯಾಲಯವನ್ನು 1890ರಲ್ಲಿ ಪ್ರಾರಂಭಿಸಲಾಯಿತು. ಇದು ಪ್ರಪಂಚದಲ್ಲೇ ಖ್ಯಾತಿ ಪಡೆದ ಸಂಶೋಧನೆ ಹಾಗೂ ಬೋಧನೆಯ ಕೇಂದ್ರ. 1851ರಲ್ಲಿ ಪ್ರಾರಂಭವಾದ ನಾರ್ತ್ ವೆಸ್ಟ್‍ರ್ನ್ ವಿಶ್ವವಿದ್ಯಾಲಯ ಅನೇಕ ವೃತ್ತಿ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದು ಅಮೆರಿಕದಲ್ಲಿ ಪ್ರಸಿದ್ಧಿ ಪಡೆದ ವಿಶ್ವವಿದ್ಯಾಲಯವಾಗಿದೆ. ಇಲಿನಾಯ್ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಹಲವಾರು ಪದವಿಕಾಲೇಜುಗಳಿವೆ. ಡಿಪೌಲ್ ವಿಶ್ವವಿದ್ಯಾಲಯ (1898), ಲಾಯೊಲಾ ವಿಶ್ವವಿದ್ಯಾಲಯ (1870), ರೋಸರಿ ಕಾಲೇಜ್ (1922) ಪ್ರಮುಖ ಕೆಥೊಲಿಕ್ ವಿದ್ಯಾಸಂಸ್ಥೆಗಳು. ಸ್ಕೂಲ್ ಆಫ್ ಮೆಡಿಸಿನ್ ಪ್ರಸಿದ್ಧ ವೈದ್ಯಕೀಯ ಸಂಸ್ಥೆ.

ಶಿಕಾಗೊದ ರಾಷ್ಟ್ರೀಯ ಇತಿಹಾಸ ಸಂಗ್ರಹಾಲಯವನ್ನು ಭವ್ಯಕಟ್ಟಡದಲ್ಲಿ ಪ್ರಾರಂಭಿಸಲಾಗಿದೆ. ಇದು ವಿಜ್ಞಾನ ಸಂಶೋಧನೆ ಹಾಗೂ ಪ್ರಸರಣ ಕಾರ್ಯದಲ್ಲಿ ನಿರತವಾಗಿರುವ ಪ್ರಪಂಚಖ್ಯಾತ ಸಂಸ್ಥೆ. ಇಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ಪ್ರಾತ್ಯಕ್ಷಿಕೆಗಳನ್ನು ವೀಕ್ಷಕರಿಗಾಗಿ ಇಡಲಾಗಿದೆ. ಇಲ್ಲಿ ಇನ್ನೊಂದು ಪ್ರಸಿದ್ಧ ಸಂಸ್ಥೆ ಅಕಾಡಮಿ ಆಫ್ ಸೈನ್ಸ್‍ಸ್ (1857). ಕಲೆ ಹಾಗೂ ಸಾಹಿತ್ಯಕ್ಕೆ ಸಂಬಂಧಿಸಿದ ಅನೇಕ ಸಂಸ್ಥೆಗಳು ಈ ನಗರದಲ್ಲಿವೆ.					
		(ಆರ್.ಎಸ್.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ